ಮರಿರಾವ್, ಎಂ ಜಿ -
ಕನ್ನಡ ರಂಗ ಭೂಮಿಯ ಹೆಸರಾಂತ ಹಾಸ್ಯ ನಟರು. ವರದಾಚಾರ್ಯರ ರತ್ನಾವಳಿ ನಾಟಕ ಸಭಾದಲ್ಲಿ ಹಲವು ವರ್ಷಗಳ ಕಾಲ ಬಗೆಬಗೆಯ ಹಾಸ್ಯ ಪಾತ್ರಗಳನ್ನು ನಿರ್ವಹಿಸಿ, ಹಾಸ್ಯ ಕಲಾನಿಧಿ ಎಂಬ ಬಿರುದಿಗೆ ಪಾತ್ರರಾದವರು. ಚಿಕ್ಕಂದಿನಲ್ಲಿಯೇ ಬಣ್ಣದ ಬದುಕಿಗೆ ಒಲಿದ ಇವರು, ತಮ್ಮ ಐದನೆಯ ವಯಸ್ಸಿನಲ್ಲಿ ರಂಗಭೂಮಿಯನ್ನು ಪ್ರವೇಶಿಸಿದರು(1908). ಬೆಂಗಳೂರಿನಲ್ಲಿ ವರದಾಚಾರ್ಯರು ನಾಟಕ ಆಡುತ್ತಿದ್ದ ಸಮಯದಲ್ಲಿ, ಅವರ ನಾಟಕ ಕಂಪನಿ ಸೇರಿ, ರಾಮಪಾಲ ಚರಿತ್ರೆ ನಾಟಕದಲ್ಲಿ ಬಾಲನಟನಾಗಿ ಅಭಿನಯಿಸಿ, ವರದಾಚಾರ್ಯರಾದಿಯಾಗಿ ಎಲ್ಲರ ಮೆಚ್ಚಿಗೆ ಗಳಿಸಿದರು. ಅನಂತರ ಇವರು ನಿರ್ವಹಿಸಿದ ಧ್ರುವಚರಿತ್ರೆ ನಾಟಕದ ಧ್ರುವನ ಪಾತ್ರ ಇವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತು. ಆ ಪಾತ್ರ ಮೆಚ್ಚಿದ ಕಲಾಭಿಮಾನಿಗಳು ವಾಗ್ಗೇಯಕಾರ ಕೆ. ವಾಸುದೇವಚಾರ್ಯ ಸಮ್ಮುಖದಲ್ಲಿ ಸಮಾರಂಭ ಒಂದನ್ನು ಏರ್ಪಡಿಸಿ ಇವರಿಗೆ ಬಂಗಾರದ ಕಾಪು ತೊಡಿಸಿ ಗೌರವಿಸಿದರು. ಜೀವನನಾಟಕ, ಸತ್ಯಹರಿಶ್ಚಂದ್ರ, ಕಬೀರದಾಸ, ಸತೀತುಳಸಿ, ಸಂಪೂರ್ಣ ರಾಮಾಯಣ ಮುಂತಾದ ಅನೇಕ ಪೌರಣಿಕ ನಾಟಕಗಳಲ್ಲಿ ಹಾಸ್ಯಪಾತ್ರ ಹಾಗೂ ಗಂಭೀರ ಪಾತ್ರಗಳನ್ನು ಇವರು ನಿರ್ವಹಿಸಿದ್ದಾರೆ. ಟಿ.ಪಿ. ಕೈಲಾಸಂ ಅವರೂಂದಿಗೆ ನಿಕಟ ಸಂಪರ್ಕಹೊಂದಿದ್ದ ಇವರು ಅನೇಕ ಸಾಮಾಜಿಕ ನಾಟಕಗಳಲ್ಲೂ ಪಾತ್ರವಹಿಸಿದ್ದಾರೆ. ಇವರು ಹಾಡಿರುವ ನಾನೊಂದು ಮದುವೆಯ ಮಾಡಿಕೊಂಬೆ ಎಂಬ ಹಾಡು ಕೊಲಂಬಿಯಾ ಕಂಪನಿಯಿಂದ ಧ್ವನಿಮುದ್ರಿತವಾಗಿದೆ. 

	ಮರಿರಾಯರು ಜಿ. ನಾಗೇಶರಾಯರೊಂದಿಗೆ ಸೇರಿ ನಾಟಕ ಕಂಪನಿಯೊಂದನ್ನು ಸ್ಥಾಪಿಸಿ ಸ್ವತಂತ್ರವಾಗಿ ಸ್ವಲ್ಪಕಾಲ ನಡೆಸಿದರು. ಅನಂತರ ಬೆಂಗಳೂರು ಆಕಾಶವಾಣಿಯಲ್ಲಿ ಸ್ಟಾಫ್ ಆರ್ಟಿಸ್ಟ್ ಆಗಿ 1964 ತನಕ ಕೆಲಸಮಾಡಿದರು. 
ಮರಿರಾಯರು ದಿನಾಂಕ 11-11-1986ರಂದು ಬೆಂಗಳೂರಿನಲ್ಲಿ ತೀರಿಕೊಂಡರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ